ಕ್ಯಾಪಿಬಾರ

ದಂಶಕವರ್ಗಕ್ಕೆ ಸೇರಿದ ಪ್ರಾಣಿಗಳಲೆಲ್ಲ ಅತ್ಯಂತ ದೊಡ್ಡದು. ಹೈಡ್ರೊಕೀರಿಡೀ ಕುಟುಂಬಕ್ಕೆ ಸೇರಿದೆ. ಹೈಡ್ರೋಕೀರಸ್ ಎಂಬುದು ಇದರ ಶಾಸ್ತ್ರೀಯನಾಮ. ದಕ್ಷಿಣ ಅಮೆರಿಕದ ಮೂಲವಾಸಿ. ಮಧ್ಯ ಅಮೆರಿಕದಲ್ಲೂ ಕಾಣಬರುತ್ತದೆ. ಅರೆಜಲವಾಸಿಯಾದ ಇದು ಕೆರೆ, ಕೊಳ, ನದಿಗಳಲ್ಲೂ ಅವುಗಳ ಸುತ್ತಲಿನ ದಟ್ಟವಾದ ಕಾಡುಗಳಲ್ಲೂ ಜೀವಿಸುತ್ತದೆ. ಕ್ಯಾಪಿಬಾರ ನೋಡಲು ಗಿನಿಹಂದಿಯಂತೆಯೆ ಕಾಣುವುದಾದರೂ ಗಾತ್ರದಲ್ಲಿ ಅದಕ್ಕಿಂತ ಬಲು ದೊಡ್ಡದು. ಸಾಧಾರಣವಾಗಿ ಪೂರ್ಣ ಬೆಳೆದ ಪ್ರಾಣಿ ಸುಮಾರು 4' ಉದ್ದ ಇರುತ್ತದೆ. ತೂಕ 100-120 ಪೌಂ. ಇರುವುದುಂಟು. ಜಾಲವಿರುವ ಕಾಲ್ಬೆರಳುಗಳು(ಮುಂಗಾಲಿನಲ್ಲಿ ನಾಲ್ಕು ಮತ್ತು ಹಿಂಗಾಲಿನಲ್ಲಿ ಮೂರು ಬೆರಳುಗಳಿವೆ), ಗೊರಸಿನಂಥ ಉಗುರು, ವಿರಳವಾದ ಮೈಗೂದಲು, ಮೊಟಕಾದ ಕಿವಿಗಳು, ಸೀಳಿದ ಮೇಲ್ದುಟಿ, ಬಲು ಮೊಟಕಾದ ಬಾಲ, ಮೊಂಡುಮೂತಿ- ಇವು ಕ್ಯಾಪಿಬಾರದ ಪ್ರಮುಖ ಲಕ್ಷಣಗಳು.
ಕ್ಯಾಪಿಬಾರ ಸಂಘಜೀವಿ: ಸಾಮಾನ್ಯವಾಗಿ 10-20 ಪ್ರಾಣಿಗಳು ಗುಂಪುಗುಂಪಾಗಿ ವಾಸಿಸುತ್ತವೆ. ಇದು ಹಗಲೆಲ್ಲ ಮರೆಗಳಲ್ಲಿ ಅಡಗಿದ್ದು ಬೆಳಗಿನ ಜಾವ ಮತ್ತು ಸಂಜೆಯ ಹೊತ್ತು ಹೊರಬಂದು ಆಹಾರಾನ್ವೇಷಣೆಯಲ್ಲಿ ತೊಡಗುತ್ತದೆ. ಜಲಸಸ್ಯಗಳು ಮತ್ತು ಎಳೆಯ ಮರಗಳ ತೊಗಟೆ ಇದರ ಪ್ರಧಾನ ಆಹಾರ. ಕೆಲವೊಮ್ಮೆ ಹೊಲಗಳಿಗೆ ದಾಳಿ ಮಾಡುವುದೂ ಉಂಟು. ಕ್ಯಾಪಿಬಾರ ನೆಲದ ಮೇಲೆ ಅಷ್ಟು ಚುರುಕಾಗಿ ನಡೆಯಲಾರದು. ಶತ್ರುಗಳು ಬೆನ್ನಟ್ಟಿದಾಗ ಕೊಂಚಮಟ್ಟಿಗೆ ಓಡುವುದಾದರೂ ಬಲುಬೇಗ ನೀರಿಗೆ ಹಾರಿಬಿಡುತ್ತದೆ; ನೀರಿನಲ್ಲಿ ಮಾತ್ರ ವೇಗವಾಗಿ ಈಜಬಲ್ಲುದು. ನೀರಿನೊಳಗೆ 7-8 ಮಿನಿಟುಗಳ ಕಾಲ ಮುಳುಗಿರಲೂ ಬಲ್ಲುದು. 

ಸ್ವಭಾವತಃ ಇದು ಬಲು ಸಾಧುಪ್ರಾಣಿ. ಆದರೆ ಬೆಳೆಗಳನ್ನು ನಾಶ ಮಾಡುತ್ತದೆ. ಹೊಟ್ಟೆ ತುಂಬಿದಾಗ ಹಂದಿಯಂತೆ ಗುಟುರುಹಾಕುತ್ತ ತಿರುಗಾಡುತ್ತದೆ. ಇದು ವರ್ಷಕ್ಕೆ ಒಂದುಬಾರಿ ಮಾತ್ರ ಮರಿ ಹಾಕುತ್ತದೆ. ಮರಿಗಳ ಸಂಖ್ಯೆ ಒಂದು ಸೂಲಿಗೆ 2-8; ಗರ್ಭಧಾರಣೆಯ ಕಾಲ 15-18 ವಾರಗಳು. ಹುಟ್ಟುವಾಗಲೆ ಚೆನ್ನಾಗಿ ಬೆಳೆದಿರುವ ಮರಿಗಳು ಬಹಳ ಕಾಲ ತಾಯಿಯೊಡನೆ ಇರುತ್ತವೆ. ಕ್ಯಾಪಿಬಾರ ಸುಮಾರು 8-10 ವರ್ಷ ಬದುಕಿರುತ್ತದೆ.

	ಮಾಂಸಕ್ಕಾಗಿ ಈ ಪ್ರಾಣಿಯನ್ನು ಬೇಟೆಯಾಡುವುದುಂಟು. 				(ಎಸ್.ಎನ್.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ